ಮಾರ್ಟಿನ್, ಆರ್ಚರ್ ಜಾನ್ ಪೋರ್ಟರ್
1910. ಇಂಗ್ಲಿಷ್ ಜೀವ ರಸಾಯನವಿಜ್ಞಾನಿ. ಜನನ ಲಂಡನ್ 1-3-910. ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪಡೆದು (1936) ಆ ದಶಕದಲ್ಲಿ ಆಹಾರ ಪ್ರಯೋಗಮಂದಿರಗಳಲ್ಲಿ ದುಡಿದರು. ಪೋಷಕಗಳ (ನ್ಯೂಟ್ರಿಯೆಂಟ್ಸ್) ಅಧ್ಯಯನ ಪ್ರಧಾನ ಆಸಕ್ತಿ. ಫಲವಾಗಿ ಪ್ರೋಟಿನುಗಳ ಸಂಕೀರ್ಣ ಕ್ಷೇತ್ರ ಪ್ರವೇಶ.

ಅಮೈನೋ ಆಮ್ಲಗಳ ಸಂಯೋಜಿತ ಸರಪಳಿಯೇ ಪ್ರೋಟಿನ್ ಎಂಬುದನ್ನು ಎಮಿಲಿ ಫಿಶರ್ ಆ ಮೊದಲೇ ಪ್ರಾಯೋಗಿಕವಾಗಿ ತೋರಿಸಿದ್ದ. ಆದರೆ ನಿರ್ದಿಷ್ಟ ಪ್ರೋಟಿನನ್ನು ಘಟಕ ಅಮೈನೋ ಆಮ್ಲಗಳಾಗಿ ವಿಭಜಿಸಿ ಅದರ ಲಕ್ಷಣ ನಿರ್ಧರಿಸುವುದು ಅತ್ಯಂತ ಕಠಿಣ ಕಾರ್ಯವಾಗಿತ್ತು. ಜೀವರಸಾಯನವಿಜ್ಞಾನಿಗಳ ಒಂದು ತಲೆಮಾರೆ ಈ ದಿಶೆಯಲ್ಲಿ ಸೋಲು ಎದುರಿಸಿತ್ತು. ಅಮೈನೋ ಆಮ್ಲಗಳು ಬಹಳಷ್ಟು ಒಂದೇ ರೂಪದವಾಗಿದ್ದುದರಿಂದ ಸಾಧಾರಣ ರಾಸಾಯನಿಕ ವಿಧಾನಗಳಿಂದ ಇದನ್ನು ವಿಭೇದೀಕರಿಸುವುದು ಸಾಧ್ಯವಾಗುತ್ತಿರಲಿಲ್ಲ.

ಆ ವೇಳೆಗೆ ಬಳಕೆಗೆ ಬಂದಿದ್ದ ವರ್ಣಲೇಖನ (ಕ್ರೊಮಟಾಗ್ರಫಿ) ಎಂಬ ತಂತ್ರ ಬಹಳಷ್ಟು ಒಂದೇ ರೂಪದ ಸಸ್ಯವರ್ಣಕಗಳನ್ನು ಪ್ರತ್ಯೇಕೀಕರಿಸಲು ಸಾಕಾಗಿತ್ತು. ಅಮೈನೊ ಆಮ್ಲಗಳನ್ನು ಕುರಿತಂತೆ ಇದಕ್ಕೆ ಸದೃಶವಾದ ಆದರೆ ಇನ್ನೂ ಅಲ್ಪ ಮಾನಕದಲ್ಲಿ ಬಳಸಬಹುದಾದ ಒಂದು ತಂತ್ರ ಅವಶ್ಯವಾಗಿತ್ತು. ಸರಂಧ್ರ ಶೋಧಕ ಪತ್ರದ (ಫೊರಸ್ ಫಿಲ್ಟರ್ ಪೇಪರ್) ಲೇಖನ ತಂತ್ರವನ್ನು ಪ್ರಯೋಗಿಸಬಹುದೆಂಬ ಹೊಳಹು ಮಾರ್ಟಿನ್ ಮತ್ತು ಇವರ ಸಹಕಾರ್ಯಕರ್ತ ಸಿಂಜ್ ಇವರಲ್ಲಿ ಮಿನುಗಿತು.
ಅಮೈನೋ ಆಮ್ಲ ಮಿಶ್ರಣದ ಒಂದು ತೊಟ್ಟನ್ನು ಪಟ್ಟಿಯ ಬುಡದಲ್ಲಿ ಒಣಗಲು ಬಿಟ್ಟ. ನಿರ್ದಿಷ್ಟವಾದ ಒಂದು ವಿಲೇಯಕವನ್ನು (ಸಾಲ್ವೆಂಟ್) ಈ ಪಟ್ಟಿಯ ನೇರ ಲೋಮನಾಳ ಕ್ರಿಯೆಯ ಅನುಸಾರ ಮೇಲಕ್ಕೆ ತೆವಳಲು ಬಿಡಬೇಕು (ಪಟ್ಟಿಯ ಬುಡದ ಅಂಚು ವಿಲೇಯಕದ ಒಳಗೆ ಅದ್ದಿಕೊಂಡಿರಬೇಕು). ಪಟ್ಟಿಯ ನೇರ ತೆವಳುವ ವಿಲೇಯಕ ಒಣಗಿದ ಮಿಶ್ರಣವನ್ನು ದಾಟಿದಾಗ ಅದರಲ್ಲಿಯ ವಿವಿಧ ಆ ಅಮೈನೋ ಆಮ್ಲಗಳು ಕೂಡ ಇದರ ಜೊತೆ ಮೇಲಕ್ಕೆ ತೆವಳುತ್ತವೆ-ಆದರೆ ವಿಭಿನ್ನದರಗಳಲ್ಲಿ. ಈ ದರಗಳು ವಿಲೇಯಕದಲ್ಲಿ ಮತ್ತು ನೀರಿನಲ್ಲಿ ಪ್ರತಿಯೊಂದು ಅಮೈನೋ ಆಮ್ಲದ ವಿಲೀನಶೀಲತೆಯನ್ನು ಅವಲಂಬಿಸಿವೆ. ಹೀಗೆ ಅಂತಿಮ ಹಂತದಲ್ಲಿ ಅಮೈನೋ ಆಮ್ಲಗಳು ಪ್ರತ್ಯೇಕಿಸಲ್ಪಡುತ್ತವೆ. ಗೊತ್ತಿರುವ ಅಮೈನೋ ಆಮ್ಲಗಳನ್ನು ಇದೇ ಪರೀಕ್ಷೇಗೆ ಒಳಪಡಿಸಿ ಅವು ಏರುವ ಸ್ಥಾನಗಳನ್ನು ಗುರತಿಸಿ ಒಂದು ಮಾನಕವನ್ನು ಸಿದ್ಧಪಡಿಸಬೇಕು. ಇದರ ಜೊತೆಗೆ ಪ್ರಯೋಗ ಲಭ್ಯ ಫಲಿತಾಂಶಗಳನ್ನು ಹೋಲಿಸಿ ಮಿಶ್ರಣದ ಘಟಕಗಳ ಸಂಯೋಜನೆಯನ್ನು ಅರಿಯಬಹುದು. ಅಲ್ಲದೇ ಪ್ರತಿಯೊಂದು ನೆಲೆಯಲ್ಲಿ ಅಮೈನೋ ಆಮ್ಲದ ಮೊತ್ತವನ್ನು ಕೂಡ ನಿರ್ಧರಿಸಬಹುದು.

1944ರಲ್ಲಿ ಅಭಿವರ್ಧಿಸಲಾದ ಈ ಪತ್ರವರ್ಣಲೇಖನ ತಂತ್ರ ತತ್‍ಕ್ಷಣದ ಯಶಸ್ಸು ಗಳಿಸಿತು. ಹಲವುಬಗೆಯ ಮಿಶ್ರಣಗಳ ಘಟಕಗಳನ್ನು ಪತ್ತೆಹಚ್ಚಲು ಇದನ್ನು ಅತ್ಯಂತ ಫಲಪ್ರದವಾಗಿ ಬಳಸಲಾಯಿತು. ಪ್ರೋಟಿನ್ ಅಣುಗಳಲ್ಲಿರುವ ವಿಶಿಷ್ಟ ಅಮೈನೋ ಆಮ್ಲಗಳ ಸಂಖ್ಯೆ ಎಷ್ಟೆಂಬುದನ್ನು ನಿರ್ಧರಿಸಿದ್ದೇ ಈ ಪತ್ರವರ್ಣಲೇಖನ ತಂತ್ರ. ಇದನ್ನು ಪ್ರಯೋಗಿಸಿ ಸ್ಯಾಂಗರ್ ಇನ್ಸುಲಿನ್ ಅಣುವಿನಲ್ಲಿ ಅಮೈನೋ ಆಮ್ಲಗಳು ಯಾವ ಕ್ರಮದಲ್ಲಿ ಜೋಡಣೆಗೊಂಡಿವೆ ಎಂಬುದನ್ನು ಪತ್ತೆ ಮಾಡಿದ. ಪುನಃ ಸಮಸ್ಥಾನೀಯ ಅನುರೇಖಿಗಳನ್ನು (ಐಸೊಟಾಪಿಕ್ ಟ್ರೇಸರ್ಸ್) ಪತ್ರವರ್ಣಲೇಖನದ ಜೊತೆ ಬಳಸಿ ಕಾಲ್ವಿನ್ ದ್ಯುತಿಸಂಶ್ಲೇಷಣೆಯ ರಹಸ್ಯ ಭೇದಿಸಿದ.

ಸಹಜವಾಗಿಯೇ ಮಾರ್ಟಿನ್ ಮತ್ತು ಸಿಂಜ್ ಇವರಿಗೆ ಅತ್ಯಂತ ಸರಳವೂ ವಿಶೇಷ ಉಪಯುಕ್ತವೂ ಆದ ಈ ತಂತ್ರದ ಆವಿಷ್ಕಾರಕ್ಕಾಗಿ ರಸಾಯನವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಕ ದೊರೆಯಿತು. (1952). ಜಾನ್‍ಪ್ರೈಸ್ ವೆಟ್ ಹಿರಿಲ್ ಪದಕ (1959). ಫ್ರಾಂಕ್ಲಿನ್ ಸಂಸ್ಥೆಯ ಪದಕ (1959) ದೊರೆತವಲ್ಲದೆ ಲೀಡ್ಸ್ ಮತ್ತು ಗ್ಲಾಸ್ಗೋ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟೊರೇಟ್ ಪದವಿಗಳನ್ನು ಪ್ರಧಾನಿಸಿವೆ.

ಅನಿಲ ಮಿಶ್ರಣಗಳನ್ನು ಕೂಡ ವಿಭೇದೀಕರಿಸಲು ಅನಿಲ ವರ್ಣಲೇಖನ ತಂತ್ರವನ್ನು ಮಾರ್ಟಿನ್ ಶೋಧಿಸಿದ್ದಾರೆ (1953). ಈ ತಂತ್ರವೂ ವಿಜ್ಞಾನಿಗಳಿಗೆ ಒಂದು ವಿಶೇಷ ವರವಾಗಿ ಪರಿಣಮಿಸಿದೆ.
(ಟಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ